Saturday, September 21, 2013

ನಮನ ಬ್ಲಾಗಿನಲ್ಲಿ ಏಕಾದಶಾನನ

" ಏಕಾದಶಾನನ "(ರಾವಣನ ಹನ್ನೊಂದನೆಯ ಮುಖ!!)










" ಏಕಾದಶಾನನ "
(ರಾವಣನ ಹನ್ನೊಂದನೆಯ ಮುಖ!!)

ಅದ್ಬುತ ರಂಗ ಸಜ್ಜಿಕೆಯೊಂದಿಗೆ ಆಳ್ವಾಸ್ ವಿದ್ಯಾರ್ಥಿಗಳ ಅಭಿನಯದ ಮೂಲಕ ರಾವಣನ ಹನ್ನೊಂದನೆಯ ಮುಖವನ್ನು ತೆರೆದಿಡುವ " ಏಕಾದಶಾನನ "ಎಂಬ ಕಥಾನಕವು ನಾಟಕ ರೂಪದಲ್ಲಿ ಪ್ರದರ್ಶನಗೊಂಡು ರಾವಣನ ಹನ್ನೊದನೆಯ ಮುಖವನ್ನು ಅನಾವರಣಗೊಳಿಸಿದೆ.
ಮೂಡಬಿದಿರೆ ಆಳ್ವಾಸ್ ಪ್ರತಿಷ್ಟಾನದ ಅದ್ಯಕ್ಷ ಕಲಾ ಆರಾಧಕ ಡಾ.ಎಂ.ಮೋಹನ್ ಆಳ್ವ ಅವರ ಹಿರಿತನದಲ್ಲಿ ಸಂಸ್ಥೆಯ ವಿಧ್ಯಾರ್ಥಿಗಳು ನಾಟಕ ರಂಗ ಭೂಮಿಗೆ ನೀಡಿದ ಈ ಕೊಡುಗೆ ನಿಜಾವಾಗಿಯೂ ಹೆಚ್ಹಿನ ಜನರಿಗೆ ತಿಳಿದಿರದ ಸತ್ಯವನ್ನು ತೆರೆದಿಟ್ಟಿತು.ಮೂವತ್ತು ನಿಮಿಷಗಳಲ್ಲಿ ಮೂಡಿ ಬಂದ ಈ ಕಥಾ ವಸ್ತುವಿನಿಂದ ಹೊರ ಹೊಮ್ಮಿದ ಸಂದೇಶ ರಾವಣ ಕ್ರೂರಿಯಾದರೂ ಆತನ ಹೃದಯ ಶ್ರೀಮಂತಿಕೆ ಏನೆಂಬುದನ್ನು ಸಾರಿತ್ತು.
ಮೂಲ ವೇದ ವ್ಯಾಸ ರಾಮಾಯಣದ ಸಣ್ಣ ಉಪ ಕಥೆಯೊಂದನ್ನಾಧರಿಸಿ ಯುವ ವಕೀಲ,ಬರಹಗಾರ ಶಶಿರಾಜ್ ರಾವ್ ಕಾವೂರು ನಾಟಕ ಕೃತಿಯನ್ನಾಗಿಸಿದ್ದಾರೆ.ಬಹುಜನರಿಗೆ ತಿಳಿದಿಲ್ಲದ ರಾವಣನ ಹನ್ನೊಂದನೇ ಮುಖವನ್ನು ಮನ ಮಿಡಿಯುವಂತೆ ನಿರ್ದೇಶನದ ಮೂಲಕ ವಿದ್ಯಾರ್ಥಿಗಳ ಮೂಲಕ ವಿದ್ಯಾರ್ಥಿಗಳ ಅಭಿನಯದ ಮೂಲಕ ಹೊರ ಹೊಮ್ಮಿಸಿದವರು ರಂಗ ನಿರ್ದೇಶಕ ಜೀವನರಾಂ ಸುಳ್ಯ.
ಕಥಾ ಸಾರಾಂಶ:-
ರಾವಣ ಸಂಹಾರದ ನಂತರ ಶ್ರೀ ರಾಮ ಪಟ್ಟಾಭಿಷೆಕದ ತಯಾರಿ ನಡೆಯುತ್ತಿರಲು ರಾಮನು ಏಕ ಮನಸ್ಕನಾಗಿ ಕುಳಿತ್ತಿದ್ದಾಗ ಕೌಸಲ್ಯೆಯು ಮಗನನ್ನು ಕಂಡು ರಾವಣನನ್ನು ದೂಷಿಸುತ್ತ ಇಷ್ಟೆಲ್ಲಾ ರಾಮಾಯಣ! ನಡೆಯಲು ಅವನೇ ಕಾರಣ ಎನ್ನುವಾಗ ರಾಮನು ರಾವಣನನ್ನು ಹೊಗಳುತ್ತಾ ರಾವಣನ ಹನ್ನೊಂದನೆಯ ಮುಖವನ್ನು ಬಣ್ಣಿಸುವ ಹಿನ್ನೆಲೆ ದೃಶ್ಯಗಳಿಂದ ಕಥೆಯ ಆರಂಭ.

ಲಂಕೆಯಲ್ಲಿ ಶ್ರೀ ರಾಮಚಂದ್ರ ರಾವಣರ ಅಂತಿಮ ಯುದ್ದದ ಸಂದರ್ಬದಲ್ಲಿ ಆಗಸ್ಯ ಮುನಿಗಳ ಸಲಹೆಯಂತೆ "ಶ್ರೀ ರಾಮ ರಕ್ಷಾ ಹೋಮ"ಮಾಡಿದರೆ ಮಾತ್ರ ನಿನಗೆ ಜಯ ಎನ್ನಲು ರಾಮನು ಹೋಮ ನಡೆಸಲು ನಿರ್ದರಿಸುತ್ತಾನೆ.
ಆದರೆ ಹೋಮದ ಪೌರೋಹಿತ್ಯ ವಹಿಸಲು ಸೂಕ್ತ ಪುರೋಹಿತನ ಕೊರತೆ ಲಂಕಾ ಪಟ್ಟಣದಲ್ಲಿರುತ್ತದೆ,ಕಪಿ ಸೈನ್ಯವನ್ನು ಕಳುಹಿಸಿ ಇಡೀ ಲಂಕೆನ್ನೇ ಜಾಲಾಡಿಸಿದರೂ ಸಕಲ ವೇದ ಪಾರಂಗತನಾದ ದಶಕಂಠ ರಾವಣನನ್ನು ಹೊರತು ಪಡಿಸಿ ಬೇರಾರಿಗೂ ಈ ಹೋಮ ನಡೆಸುವ ಅರ್ಹತೆ ಇಲ್ಲ ಎಂಬ ಸತ್ಯ ತಿಳಿಯುತ್ತದೆ,ಆಗಸ್ಯ ಮುನಿಗಳ ಅಪೇಕ್ಷೆಯಂತೆ "ಶ್ರೀ ರಾಮ ರಕ್ಷಾ ಹೋಮ"ನಡೆಸಲೇ ಬೇಕು,
ಪರಮ ವೈರಿಯನ್ನೇ ಪೌರೋಹಿತ್ಯಕ್ಕೆ ಆಹ್ವಾನಿಸುವುದೇ? ಅದು ಸಾದ್ಯವೇ?ಎಂಬ ಗೊಂದಲ ಮನದಲ್ಲಿ ಪುಳಕಿಸುತ್ತಿದ್ದರೂ ದೂತನಾಗಿ ಹನುಮಂತ ರಾವಣನ ಬಳಿ ಬಂದೇ ಬಿಡುತ್ತಾನೆ,ಈ ಹಿಂದೆ ಲಂಕೆಗೆ ಪ್ರವೇಶಿಸಿದಾಗ ಬಾಲಕ್ಕೆ ಕಿಚ್ಹು ಹಚ್ಹಿಸಿದ ರಾವಣ ಈ ಬಾರಿ ಏನು ಸಿಟ್ಟಾಗುವನೋ ?ಏನು ಆಥಿತ್ಯ ನೀಡುವನೋ? ಎಂಬ ತವಕದಲ್ಲಿರಲು 'ಅಥಿತಿ ದೇವೋಭವ"ಎಂಬಂತೆ ವರ್ತಿಸುವ ರಾವಣ,
ಹನುಮಂತನು ಮುನಿಗಳ ಅಪೇಕ್ಷೆಯಂತೆ "ಶ್ರೀ ರಾಮ ರಕ್ಷಾ ಹೋಮ"ದ ಪೌರೋಹಿತ್ಯ ವಹಿಸಲು ಭಿನ್ನವಿಸಿಕೊಂಡಾಗ ಸಂತೋಷದಿಂದ ಒಪ್ಪಿ ಆಗಮಿಸುವ ರೋಮಾಂಚಕ ಸನ್ನಿವೇಶ ನಿಜವಾಗಿಯೂ ಅಭೂತಪೂರ್ವವಾಗಿತ್ತು.
ಇಷ್ಟರಲ್ಲಿಯೇ ಕೌತುಕದ ಶೃಂಗವೇರಿದ ಪ್ರೇಕ್ಷಕರ ಮನದಲ್ಲಿ ರಾವಣ ಬಂದು ಏನು ಮಾಡುತ್ತಾನೆ ಎಂಬ ಎಂಬ ಪ್ರಶ್ನೆ.ಹೋಮ ನಡೆಯುತ್ತಿದ್ದಂತೆ ಹೋಮ ಪೂರ್ಣವಾಗಬೇಕಾದರೆ ಶ್ರೀರಾಮಚಂದ್ರ ದಂಪತಿ ಸಮೇತವಾಗಿ ಹೋಮ ನಡೆಸಬೇಕು ಎಂಬ ಸಲಹೆ ನೀಡುತ್ತಾನೆ .ಆದರೆ ಸೀತಾ ಮಾತೆಯನ್ನು ಆ ಕ್ಷಣ ಎಲ್ಲಿಂದ ಕರೆತರಲು ಸಾದ್ಯ?ಅಶೋಕ ವನದಲ್ಲಿ ಬಂದಿಯಾಗಿರುವ ಸೀತೆಯನ್ನು ಪುರೋಹಿತ (ರಾವಣ ) ಕರೆತರಲು ಬಿಡುವನೆ? ಪುರೋಹಿತನ ಸಲಹೆ ಕಪಿ ಸೈನ್ಯವನ್ನು ಕೆರಳಿಸಲು,ಹೋಮ ಅರ್ದದಲ್ಲಿ ನಿಂತಿತಾದರೆ ಅದರ ದೋಷ ಹೋಮ ನಡೆಸಿದ ಶ್ರೀರಾಮಚಂದ್ರನಿಗೆ,
ಹೀಗಿರುವಾಗ ಮುಂದೇನು ಮುಂದೇನು ಆತಂಕದ ನಡುವೆ ಪುರೋಹಿತನು ಶಾಂತ ರೀತಿಯಲ್ಲಿ ಉದ್ಗರಿಸುತ್ತಾನೆ ಹೋಮದಲ್ಲಿ ಪಾಲ್ಗೊಳ್ಳಲು ಸೀತೆಯನ್ನು ಕರೆತರಲು ಹೋಮ ಮುಗಿದ ಬಳಿಕ ಸೀತೆಯನ್ನು ಅಶೋಕವನಕ್ಕೆ ಹಿಂತಿರುಗಿಸಬೇಕೆಂಬ ಷರತ್ತು ಬದ್ದ ಅನುಮತಿ ನೀಡುತ್ತಾನೆ.
ಅಂತೆಯೇ ಸೀತೆಯೇ ಆಗಮನವಾಗುತ್ತದೆ."ಶ್ರೀ ರಾಮ ರಕ್ಷಾ ಹೋಮ"ಸಾಂಗವಾಗಿ ನೆರವೇರುತ್ತದೆ.ಶ್ರೀ ರಾಮನಿಗೆ ಒಳಿತಾಗಲಿ ಎಂದು ಪುರೋಹಿತ ಹರಸುತ್ತಾನೆ!ನನ್ನನ್ನು ಗೆದ್ದ ನಂತರೆವೆ ಸೀತೆಯನ್ನು ಕರೆದುಕೊಂಡು ಹೋಗಬೇಕು ಷರತ್ತಿನಂತೆ ಸೀತೆ ಅಶೋಕ ವನವನ್ನು ಸೇರುತ್ತಾಳೆ.

ಹತ್ತು ತಲೆಯ ರಾವಣನು ಪೌರೋಹಿತ್ಯ ನಡೆಸಲು ಒಪ್ಪಿ ತನ್ನ ಒಂಬತ್ತು ತಲೆಗಳನ್ನು ಕಳಚಿ ಬರುವಂತಹ ದೃಶ್ಯಾವಳಿ,ಬಳಿಕ ಬ್ರಾಹ್ಮಣ ವಟುವಾಗಿ ಬರುವಂತಹ ಮೃದುತ್ವ,ಸೀತೆಯ ಆಗಮನ,ಹೋಮದಲ್ಲಿ ಮೊಳಗಿದ ಜಪ ಮಂತ್ರ ಘೋಷಗಳು ನಾಟಕದುದ್ದಕ್ಕೂ ನೈಜ್ಯತೆಯ ಶೈಲಿಯಲ್ಲಿಯೇ ಮೂಡಿ ಬಂದಿದ್ದು,ಕಥಾವಸ್ತುವನ್ನು ದಿಗ್ದರ್ಶನದ ಮೂಲಕವೇ ಜನಮನ ಸೆಳೆಯುವಂತೆ ಮಾಡಿರುವುದು ನಿಜವಾಗಿಯೂ ಶ್ಲಾಗನೀಯವೇ ಸರಿ, ಕೇವಲ ಮೂವತ್ತು ನಿಮಿಷಗಳಲ್ಲಿ ಇಡೀ ಸನ್ನಿವೇಶವನ್ನು ಹಣೆದಿದ್ದರೂ ವಿಶ್ವ ವಿದ್ಯಾಲಯ ಮಟ್ಟದ ಸ್ಪರ್ದೆಯಲ್ಲಿ ಸಮಯದ ಅಭಾವದಿಂದ ಇದು ಅನಿವಾರ್ಯವಾಗಿತ್ತು.
ಮತ್ತು ಕತೆಯ ಮೂಲ ತತ್ವಕ್ಕೆ ಕೊರತೆಯಾಗದಂತೆ ಈ ನಾಟಕ ಕಲಾಭಿಮಾನಿಗಳ ಮನದಲ್ಲಿ ಅಚ್ಹೊತ್ತಿದೆ
ಮಂಗಳೂರು ವಿ.ವಿ. ಯು ಕುಂದಾಪುರ ಭಂಡಾರ್ಕರ್ಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಅಂತರ್ ಕಾಲೇಜು ಯುವಜನೋತ್ಸವದಲ್ಲಿ ಈ ನಾಟಕ ಪ್ರಥಮ ಸ್ಥಾನ ಪಡೆದಿದ್ದು,ಇತ್ತೆಚೆಗಷ್ಟೇ ತಮಿಳುನಾಡಿನ ತಂಜಾವೂರಿನಲ್ಲಿ ನಡೆದ ಅಂತರ್ ವಿಶ್ವವಿದ್ಯಾಲಯ ದಕ್ಷಿಣ ಭಾರತ ವಲಯ ಯುವಜನೋತ್ಸವದಲ್ಲಿ ಭಾಗವಹಿಸಿ 27 ವಿಶ್ವವಿದ್ಯಾಲಯಗಳ ಪೈಕಿ ಪ್ರಥಮ ಸ್ಥಾನಗಳಿಸಿ,ಮುಂಬರುವ ಜನವರಿ 5ರಿಂದ 9ರವರೆಗೆ ತಿರುಪತಿಯಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಯುವಜನೋತ್ಸವದಲ್ಲಿ ಆಳ್ವಾಸ್ ತಂಡ ಈ ನಾಟಕದೊಂದಿಗೆ ಇಡೀ ದಕ್ಷಿಣ ಭಾರತವನ್ನೇ ಪ್ರತಿ ನಿಧಿಸಲಿದೆ.
ರಾಷ್ಟ್ರಮಟ್ಟದಲ್ಲಿಯೂ ಈ ತಂಡದ ಪ್ರದರ್ಶನ ಯಶಸ್ಹ್ವಿಯಾಗಲಿ ಎಂದು ನಾವೆಲ್ಲಾ ಹಾರೈಸೋಣ.
ಪ್ರತಿ ವರ್ಷವೂ ಆಳ್ವಾಸ್ ನುಡಿಸಿರಿ,ಆಳ್ವಾಸ್ ವಿರಾಸತ್ ನಂತಹ ವಿಶಿಷ್ಟ ಕಾರ್ಯಕ್ರಮಗಳನ್ನೂ ನೀಡುತ್ತಿರುವ ,ಶಿಕ್ಷಣದಷ್ಟೇ ಮಹತ್ವವನ್ನು ಸಾಂಸ್ಕೃತಿಕ ಚಟುವಟಿಕೆಗೂ ನೀಡುತ್ತಿರುವ ಆಳ್ವಾಸ್ ಪ್ರತಿಷ್ಟಾನದ ಅದ್ಯಕ್ಷ ಡಾ.ಎಂ.ಮೋಹನ್ ಆಳ್ವರಿಗೂ ರಂಗ ನಿರ್ದೇಶಕ ಜೀವನ್ ರಾಂ ಸುಳ್ಯ ಇವರಿಗೂ ಮನದಾಳದ ನಮನ.ಏ

ಏಕಾದಶಾನನ - ಕರುಣಾಕರ್ ಬಳ್ಕೂರು

‘ರಾವಣನ ಹೊಸ ಮುಖ ಅನಾವರಣಗೊಳಿಸಿದ 

ವಿಶಿಷ್ಟ ರಂಗ ಪ್ರಯೋಗ :- ಏಕಾದಶಾನನ ’


by ನಿಲುಮೆ
ಕರುಣಾಕರ ಬಳ್ಕೂರು
ವೇದವ್ಯಾಸ ರಾಮಾಯಣದ ಸಣ್ಣ ಎಳೆಯೊಂದನ್ನು ತೆಗೆದು ನಾಟಕರಂಗಕ್ಕೆ ಅಳವಡಿಸಿದ ರೀತಿ ಸೃಜನಶೀಲವಾದದ್ದು. ‘ಜಯ ರಾಮ ಜಯ ಜಯ ರಾಮ’ ಎನ್ನುವ ರಾಮ ನಾಮ ಸ್ಮರಣೆಯನ್ನು ಹೊಗಳುತ್ತ ಭಕ್ತರ ಗುಂಪಿನ ಆಗಮನ, ಇಂದು ರಾಮನ ಪಟ್ಟಾಭಿಷೇಕವಂತೆ.., ಭರ್ಜರಿ ಊಟ, ಮನೋರಂಜನೆ ಹಾ.. ಹಾ.. ಎಲ್ಲರ ಮೊಗದಲ್ಲಿಯೂ ಸಂತೋಷದ ಹೂಮಳೆ. ಅಯೋಧ್ಯೆಯ ನಗರಕ್ಕೆ ರಾಜ ಮಹಾರಾಜರು, ಪುರಜನರು, ಬಂಧುಗಳು, ರಾಮನ ಭಕ್ತರು, ಹಿತೈಷಿಗಳು ಹೀಗೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ದ್ವಾರಪಾಲಕನಂತೂ ಬಂದವರನ್ನು ಸುಧಾರಿಕೆ ಮಾಡುವ ದೊಡ್ಡ ಕೆಲಸವನ್ನು ಲವವಿಕೆಯಿಂದ ನಿಭಾಯಿಸುವುದು ನಾಟಕದ ಆರಂಭಕ್ಕೆ ಮುನ್ನುಡಿಯಾಗಿದೆ.
ಬಂದಿರುವವರ ಕುದುರೆಗಳನ್ನು ಇಲ್ಲಿ ಕಟ್ಟಿ, ಅಲ್ಲಿ ಕಟ್ಟಿ, ದೂರದ ರಾಜರುಗಳಿಗೆ ಉಳಿಯಲು ಅತಿಥಿ ಗೃಹ ಅಲ್ಲಿದೆ, ರಾಮನ ಪಟ್ಟಾಭೀಷೇಕಕ್ಕೆ ಚಿನ್ನ, ಬೆಳ್ಳಿ, ಹಣವನ್ನು ಕಾಣಿಕೆಯಾಗಿ ತಂದವರು ಭಂಡಾರದಲ್ಲಿ ಕೊಟ್ಟು ರಶೀದಿಯನ್ನು ತಪ್ಪದೇ ಪಡೆಯಿರಿ, ಮತ್ತೆ ಊಟ ಮಾಡುವಲ್ಲಿ ನೂಕು ನೂಗ್ಗಲು ಮಾಡದಿರಿ ಎಂದು ಆಗಮಿಸಿರುವ ಸರ್ವರಲ್ಲಿ ಬಿನ್ನೈಸಿಕೊಳ್ಳುತ್ತ ದ್ವಾರಪಾಲಕನು ರಾಮನ ಪಟ್ಟಾಭಿಷೇಕಕ್ಕೆ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾನೆ.
ಎರಡನೆ ದೃಶ್ಯದಲ್ಲಿ ಕೌಸಲ್ಯೆ ಮತ್ತು ರಾಮನು ಕಷ್ಟ-ಸುಖಗಳ ಬಗ್ಗೆ ಕುಳಿತು ಹರಟೆ ಹೊಡೆಯುತ್ತಾರೆ. ಆಗ ರಾಮ, ರಾಮಣನ ಪರವಹಿಸಿ ಮಾತನಾಡಿದಾಗ ಕೌಸಲ್ಯೆ ಕೆಂಡಮಂಡಲವಾಗಿ ರಾವಣನನ್ನು ದೂಷಿಸುತ್ತಾ ಆಕ್ರೋಶವನ್ನು ವ್ಯಕ್ತಪಡಿಸುತ್ತಾಳೆ. ಆದರೆ ರಾಮ, ರಾವಣನ ಅಂತಃಕರಣವನ್ನು ಮನಸಾರೆ ಮೆಚ್ಚಿ ತನ್ನ ಅನುಭವದ ನುಡಿಗಳನ್ನು ಕೌಸಲ್ಯೆಯಲ್ಲಿ ಬಿಚ್ಚಿಡುತ್ತಾನೆ. ನಾಟಕದ ನಡುವೆಯೇ ಹಿಂದೆ ನಡೆದ ಎಲ್ಲಾ ಘಟನೆಗಳು ರಂಗಮಂಟಪದ ಮೇಲೆ ಒಂದರ ಮೇಲೆ ಒಂದರಂತೆ ಚಿತ್ರ ಪಟಲಗಳ ಮೂಲಕ ಬಂದು ಹೋಗುವಾಗ ರಾಮಾಯಣದ ಕಥೆಯು ಅನಾವರಣಗೊಳ್ಳುತ್ತದೆ. ಇದು ನಿರ್ದೇಶಕರ ಕೈಚಳಕದಿಂದ ವಿನೂತನವಾಗಿ ಮೂಡಿಬಂದಿದೆ.
ಸೀತೆಯು ರಾವಣನ ಕೈಮುಷ್ಟಿಯೊಳಗಿದ್ದರೂ ರಾಮನ ಸ್ಮರಣೆಯನ್ನೇ ಮಾಡುತ್ತಿರುತ್ತಾಳೆ. ರಾಮನಿಗೆ ಸೀತೆಯನ್ನು ಕಾಣುವ ತವಕ ಮತ್ತು ರಾವಣನಿಂದ ಅವಳನ್ನು ಬಿಡುಗಡೆ ಮಾಡಬೇಕು ಎನ್ನುವ ಛಲ ಎಲ್ಲವೂ ಅವನನ್ನು ಎಚ್ಚರಗೊಳಿಸುತ್ತದೆ. ರಾಮ ರಾವಣರ ಯುದ್ಧಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ. ಚತುರ್ದಶ ಭುವನದಲ್ಲಿ ರಾವಣೇಶನನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂಬ ವಿಷಯ ರಾಮನ ಶಿಬಿರದಲ್ಲಿ ಚರ್ಚೆಗೀಡಾಗುತ್ತದೆ. ತ್ರಿಕೂಟ ಪರ್ವತದ ಬಳಿಯ ಸುಬೇಲ ಪರ್ವತದಲ್ಲಿ ರಾಮನ ಶಿಬಿರ. ಅಗಸ್ತ್ಯ ಮುನಿಗಳು ಬಂದು ರಾಮನಿಗೆ ಚಿರಂಜೀವಿ ಯಾಗ ಮಾಡಲು ಸಲಹೆ ನೀಡುತ್ತಾರೆ. ನನಗೆ ರಾವಣನಿಂದ ಗೆಲುವು ಸಾಧ್ಯವೆ? ಎನ್ನುವ ಪ್ರಶ್ನೆಯನ್ನು ಎತ್ತಿದಾಗ, ಗುರುಗಳು ಕಷ್ಟ ಸಾಧ್ಯವೇ, ಆದರೂ ನಾನು ಒಂದು ಮಾರ್ಗವನ್ನು ಸೂಚಿಸಬಲ್ಲೆ! ನಿನಗಿಂತ ರಾವಣನು ಸಕಲ ವಿದ್ಯೆಗಳನ್ನುಬಲ್ಲವನು, ನೀನು ರಾವಣನಿಗಿಂತ ಬಲಿಷ್ಠನಾಗಬೇಕಾದರೆ ಮತ್ತು ಆತ ತಿಳಿದಿರುವ ಎಲ್ಲಾ ವಿದ್ಯೆಗಳನ್ನು ಕರಗತ ಮಾಡಿಕೊಳ್ಳ ಬೇಕಾದರೆ ನೀನು ‘ರಾಮ ರಕ್ಷಾ ಯಾಗ’ವನ್ನು ಮಾಡಬೇಕು. ಆಗ ನಿನಗೆ ಯಾಗದಿಂದ ಫಲ ಲಭಿಸುತ್ತದೆ. ಆ ಫಲದ ಪ್ರತಿಯಾಗಿ ರಾವಣನಿಂದ ನಿನಗೆ ಖಂಡಿತವಾಗಿಯೂ ಜಯ ಲಭಿಸುತ್ತದೆ.  ಆದ್ದರಿಂದ ಸೈನ್ಯದ ಉತ್ಸಾಹ ಇಮ್ಮುಡಿಯಾಗ ಬಹುದೆಂದು ಗ್ರಹಿಸಿದ ರಾಮ ಅದಕ್ಕೆ ವ್ಯವಸ್ಥೆ ಮಾಡುವಂತೆ ಕಪಿ ಭಲ್ಲೂಕ ಸೈನ್ಯದ ಮುಖಂಡರಿಗೆ ಆದೇಶ ನೀಡುತ್ತಾನೆ. ಆದರೆ ಅಲ್ಲಿ ಹೋಮದ ಪುರೋಹಿತರು ಸಿಗಬೇಕಲ್ಲ? ಹುಡುಕಾಟ ಆರಂಭವಾಗುತ್ತದೆ. ಹನುಮಂತಾದಿಗಳು ಸುತ್ತಮುತ್ತ ವಿಚಾರಿಸಿ ನೋಡಿದಾಗ ಅಂತಹ ಒಬ್ಬನೇ ಒಬ್ಬ ವ್ಯಕ್ತಿಯ ಬಗ್ಗೆ ತಿಳಿಯುತ್ತದೆ. ರಾಮನಿಗೆ ಈ ಮಾತು ಕೇಳಿದ ತಕ್ಷಣ ಎಲ್ಲಿಲ್ಲದ ಸಂತೋಷ. ನನ್ನ ವೈರಿಯಾಗಿರುವ ರಾವಣನಿಗೆ ಸಾವು ಸಮೀಪಿಸುತ್ತಿದೆ. ಹೀಗೆ ಮುಂದೆ ನಡೆಯಲಿರುವ ಯಾಗದ ಸಂಪೂರ್ಣ ಹೊಣೆಯನ್ನು ಹನುಮಂತನಿಗೆ ವಹಿಸಿಕೊಡುತ್ತಾನೆ. ಲಂಕಾಪುರದಲ್ಲಿ ‘ರಾಮ ರಕ್ಷಾ ಯಾಗ’ವನ್ನು ಮಾಡುವುದು ಹೇಗೆ? ಎನ್ನುವ ಬಗ್ಗೆ ಕಪಿ ಸೇನೆ ಸೇರಿದಂತೆ ಎಲ್ಲರೂ ಗಾಢವಾಗಿ ಚಿಂತಿಸುತ್ತಾರೆ. ಹನುಮಂತ ಯಾಗಕ್ಕೆ ಬೇಕಾಗುವ ಸುವಸ್ತುಗಳನ್ನು ಎಲ್ಲ ಕಡೆಯಿಂದ ಸಂಗ್ರಹಿಸಿ ತರುತ್ತಾನೆ. ಆದರೆ ಈ ಯಾಗವನ್ನು ಮಾಡುವಲ್ಲಿ ಎಲ್ಲ ಪೌರೋಹಿತ್ಯವನ್ನು ಬಲ್ಲ  ಪುರೋಹಿತರು ಬೇಕು. ಅದು ಯಾರು ಎನ್ನುವ ಪ್ರಶ್ನೆ ಕಾಡುತ್ತದೆ. ಹನುಮಂತ ಪುರೋಹಿತರಿಗಾಗಿ ಇಡೀ ಲಂಕಾಪುರವನ್ನು ಜಾಲಾಡುತ್ತಾನೆ ಆದರೆ ಪುರೋಹಿತರು ಮಾತ್ರ ಸಿಗುವುದಿಲ್ಲ. ಪುರೋಹಿತರು ಸಿಗದೇ ಯಾಗ ಮಾಡುವುದು ಹೇಗೆ? ಎಂದು ಕಪಿ ಸೇನೆ ಆತಂಕಕ್ಕೆ ಒಳಗಾಗುತ್ತದೆ. ರಾಮ ರಕ್ಷಾ ಯಾಗ ಮಾಡದೆ ರಾಮನಿಗೆ ಜಯವಿಲ್ಲ, ಸೀತೆಯನ್ನು ಮುಕ್ತಿಗೊಳಿಸುವ ಬಗೆ ಎಂತು? ಎಂದು ಂಯೋಚನೆಗೆ ಇಳಿಯುತ್ತಾನೆ. ಹನುಮಂತನ  ಆಗಮನ ಆಗುತ್ತದೆ. ಎಲ್ಲ ಕಪಿಗಳ ದೃಷ್ಟಿ ಹನುಮಂತನತ್ತ. ಯಾರಾದರೂ ಪುರೋಹಿತರು/ಬ್ರಾಹ್ಮಣರು ಸಿಕ್ಕಿದರೋ? ನಗು ಮೊಗದಿ ಭಾರವಾದ ಮನಸ್ಸಿನಲ್ಲಿಯೇ ಹುಂ.. ಸಿಕ್ಕಿದರು….
ಯಾರು? ಯಾರು? ಎನ್ನುವ ಕಪಿಗಳ ಹರ್ಷೋದ್ಗಾರದ ಪ್ರಶ್ನೆಗೆ ಉತ್ತರವಾಗಿ, ಆ ವ್ಯಕ್ತಿ ಬೇರಾರು ಅಲ್ಲ ಸಾಕ್ಷಾತ್ ರಾವಣ. ಸಂದೇಹದ ನಡುವೆಯೂ ರಾಮ ರಾವಣನನ್ನು ಕರೆಯುವಂತೆ  ಹನುಮಂತನಿಗೆ ಹೇಳುತ್ತಾನೆ. ಸೈನ್ಯದ ಮುಖಂಡರಿಗೆ ರಾವಣ ಬರುತ್ತಾನೆಂದು ನಂಬಿಕೆ ಇರುವುದಿಲ್ಲ. ಆಗ ರಾಮ ಮತ್ತು ಸೈನ್ಯದ ಮುಖಂಡನಿಗೆ ಆಶ್ಚರ್ಯ ಮತ್ತು ನಿರಾಶೆಯಾಗುತ್ತದೆ. ಉತ್ತರ ಕೇಳಿದ ಅರೆ ಘಳಿಗೆಯಲ್ಲೇ, ಎಲ್ಲವೂ ಮಾಯಾವಾಗಿ ಕರಾಳ ಛಾಯೆಯ ಸನ್ನಿವೇಶ. ಹೀಗೇಕೆ ಆಯಿತು? ಎನ್ನುವ ಪ್ರಶ್ನೆ ಖಂಡಿತವಾಗಿ ಕಾಡುತ್ತದೆ. ರಾಮನಲ್ಲಿ ಈ ಪ್ರಶ್ನೆಗೆ ಉತ್ತರವೇ ಹೊಳೆಯುವುದಿಲ್ಲ, ಏನು ಮಾಡುವುದೆಂದು ತೋಚದೆ, ಹನುಮಂತನನ್ನು ಸಂಧಿಗೆ ಕಳುಹಿಸಲೇ? ರಾವಣನಿಗೆ ನಮ್ಮ ಮೇಲೆ ಈಗಾಗಲೇ ದ್ವೇಷ ಇದೆ. ಹಾಗಾಗಿರುವಾಗ ಅವನ ಮುಂದೆ ಹೋಗಿ ತಲೆಬಾಗುವುದು ಹೇಗೆ? ಎನ್ನುವ ಪ್ರಶ್ನೆಯೂ ಕೂಡ ಸಹಜವಾಗಿ ಕಾಡುತ್ತದೆ. ಆದರೆ ಹನುಮಂತ ರಾಮನ ಆಜ್ಞೆಗಾಗಿ ಕಾದಿರುತ್ತಾನೆ. ರಾಮನು ಹನುಮನಿಗೆ ರಾವಣನ ಬಳಿ ಹೋಗಿ ನಾವು ನಡೆಸುವ ಯಾಗಕ್ಕೆ ಬರಲು ಆಹ್ವಾನವನ್ನು ನೀಡಿ ಬಾ.., ಮುಂದೆ ಬರಲಿರುವ ಎಲ್ಲಾ ಘಟನೆಗಳು ವಿಧಿ ನಡೆಸಿದಂತೆ ನಡೆಯಲಿ ಎಂದು ಮುಂದಿನ ಕೆಲಸಕ್ಕೆ ಅಣಿಯಾಗುತ್ತಾನೆ. ಹನುಮಂತ ಆಹ್ವಾನವನ್ನು ಕೊಟ್ಟು ಹಿಂದಕ್ಕೆ ಬಂದಾಗ, ಯಾಗಕ್ಕೆ ಬರಲು  ಒಪ್ಪಿದ್ದಾನೆಯೆ? ಹೌದು ಯಾಗಕ್ಕೆ ಬರುತ್ತಾನಂತೆ. ಆಗ ಕಪಿ ಸಮೂಹದಲ್ಲಿ ಸಂಶಯದ ಹೊಗೆಯಾಡುತ್ತದೆ. ನಮ್ಮ ವಿರುದ್ಧವೇ ಕತ್ತಿ ಮಸೆದರೆ? ಎನ್ನುವ ಪ್ರಶ್ನೆಗಳು ಕಾಡುತ್ತದೆ.
ಏಳುಬೀಳುಗಳೊಂದಿಗೆ ಯಾಗದ ಸಕಲ ಸಿದ್ದತೆಗಳು ನಡೆಯುತ್ತದೆ, ರಾವಣನ ಅರ್ಧಾಂಗಿ ಮತ್ತು ಮಂತ್ರಿಗಳಲ್ಲಿ ಗಾಢವಾಗಿ ಈ ವಿಷಯವನ್ನು ಚರ್ಚಿಸಿ  ತನ್ನ ದಶ ತಲೆಗಳನ್ನು ತ್ಯಜಿಸಿ ಬ್ರಾಹ್ಮಣನ ರೂಪವನ್ನು ಧರಿಸಿ ಯಾಗ ಮಂಟಪಕ್ಕೆ ಬರುತ್ತಾನೆ. ಆದರೆ ಚಕ್ರವರ್ತಿಯಾಗಿ ಬಾರದೇ ತನ್ನ ‘ವೃತ್ತಿ ಧರ್ಮ’ ನಿರ್ವಹಿಸುವ ಪುರೋಹಿತನಾಗಿ ಬರುತ್ತಾನೆ. ಹೋಮದ ಸಿದ್ಧತೆ ನಡೆಯುತ್ತದೆ.  ರಾಮನು ಸೇರಿದಂತೆ ಇಡೀ ಕಪಿ ಸೈನ್ಯಕ್ಕೆ ಆಶ್ಚರ್ಯ!! ಪರಮಾಶ್ಚರ್ಯ!!! ಇದೇನು ರಾವಣ.. ಬ್ರಾಹ್ಮಣನಾಗಿ? ನಂಬಲ್ಲಿಕ್ಕೆ ಸಾಧ್ಯವೇ? ಆದರೂ ನಂಬಲೇ ಬೇಕು. ಎನ್ನುವ ಗುಸು ಗುಸು ಮಾತುಗಳು ಕೇಳಿ ಬರುತ್ತದೆ. ರಾಮನು ಬಂದಿರುವ ಬ್ರಾಹ್ಮಣನಿಗೆ ಅತಿಥಿ ಸತ್ಕಾರವನ್ನು ನೀಡಿ, ಯಾಗದ ಮಂಟಪಕ್ಕೆ ಕರೆತರುತ್ತಾನೆ. ಬ್ರಾಹ್ಮಣನ ಮೊಗದಲ್ಲೂ ಮಗುವಿನ ಮಂದಹಾಸ. ರಾಮನ ರೂಪವನ್ನು ನೋಡಿ ಮನಸಾರೆ ಮೆಚ್ಚುತ್ತಾನೆ. ಗಣಪತಿಯ ಸ್ತುತಿಯೊಂದಿಗೆ ಯಾಗವನ್ನು ಪ್ರಾರಂಭಿಸುತ್ತಾನೆ. ನೆರೆದಿರುವ ಎಲ್ಲಾರ ಚಿತ್ತವು ಬ್ರಾಹ್ಮಣನತ್ತ ಇರುತ್ತದೆ. ಯಾಗವು ವೇದಘೋಶಗಳೊಂದಿಗೆ ಪ್ರಾರಂಭಗೊಂಡರೂ ಏಕಾಕಿಯಾಗಿ ವಿಘ್ನ ಉಂಟಾಗುತ್ತದೆ. ರಾವಣ ರಾಮನಿಗೆ.. ಧರ್ಮದ ಪ್ರಕಾರ ಯಾಗ ಯಶಸ್ಸಿಯಾಗಬೇಕಾದರೆ ಯಾಗಕ್ಕೆ ದಂಪತಿಗಳಿರ್ವರು ಕುಳಿತು ಕೊಳ್ಳಲೇಬೇಕು ಎಂದು ಹೇಳುತ್ತಾನೆ. ಇಲ್ಲವಾದಲ್ಲಿ ಯಾಗ ಫಲಕಾರಿಯಾಗದು?. ಯಾಗಕ್ಕೆ ನಿನ್ನ ಪತ್ನಿ ಕುಳಿತು ಕೊಳ್ಳದೇ ಹೋಮ ನಡೆಸಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ.
ಇನ್ನೊಬ್ಬರ ಬಂಧನದಲ್ಲಿರುವ ಸೀತೆಯನ್ನು ಬಿಡಿಸಲಾಗದೆ, ನಾನು ದಂಪತಿಗಳಾಗಿ ಕುಳಿತು ಕೊಳ್ಳಲು ಹೇಗೆ ಸಾಧ್ಯ? ಆಗ ಎಲ್ಲಾರ ಮುಖದಲ್ಲೂ ನೀರವ ಮೌನ! ಗೊತ್ತು ಗೊತ್ತು ರಾವಣ ಹೀಗೆ ಮಾಡತ್ತಾನೆ ಅಂತ? ರಾವಣ ಬುದ್ಧಿಯನ್ನು ತೋರಿಸಿಯೇ ಬಿಟ್ಟ, ಕಪಟಿ ಎಂದು ಕಪಿ ಸೈನ್ಯದಲ್ಲಿ ಮಾತನಾಡಿಕೊಳ್ಳುತ್ತಾರೆ. ರಾಮ ಮನ ನೊಂದು ತಲೆಬಾಗಿ ವಿಧಿಯೇ ಹೀಗೇಕೆ ಮಾಡಿದೆ? ಎಂದು ಚಿಂತಿಸುತ್ತಾನೆ. ರಾಮನು ಧರ್ಮ ಸಂಕಟಕ್ಕೆ ಸಿಲುಕಿ ಒದ್ದಾಡುತ್ತಾನೆ? ರಾಮ ಅಸಹಾಯಕ ಸ್ಥಿತಿ ಇಲ್ಲಿ ವ್ಯಕ್ತವಾಗುತ್ತದೆ. ಈ ಯುದ್ಧ ಬೇಕೆ? ಎನ್ನುವ ಪ್ರಶ್ನೆ ದುಃಖದ ಮನಸ್ಸಿನಲ್ಲಿ ತುಂಬುತ್ತದೆ. ಆಗ ರಾವಣ ರಾಮನನ್ನು ಸಂತೈಸುವುದರ ಜೊತೆಗೆ ತನ್ನ ಒಳಗಿನ ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ. ಮತ್ತೆ ರಾಮನು ಕೂಡ ಬ್ರಾಹ್ಮಣನ ಮೊರೆ ಹೋಗಿ, ನೀವೆ ನನಗೆ ದಾರಿ ತೋರಿಸಬೇಕು? ಎಂದು ಬಿನೈಸುತ್ತಾನೆ. ರಾವಣ ಅಂದರೆ ಬ್ರಾಹ್ಮಣ ಚಿಂತಿಸದಿರು, ಚಿಂತಿಸದಿರು. ನಿನ್ನ  ಮನಸ್ಸನ್ನು ಅರ್ಥ ಮಾಡಿಕೊಳ್ಳಬಲ್ಲೇ. ರಾಮ ನನಗೆ ನಿಂದಲೇ ಸಾವು ಎನ್ನುವ ಶಾಪ ಇದೆ ಗೊತ್ತಲ್ಲವೇ? ನಾನು ಸೀತೆಯನ್ನು ಎಂದು ಕೂಡ ಕೆಳಮಟ್ಟದಲ್ಲಿ ಕಂಡವನಲ್ಲ. ತನಗೆ ರಾಮನೂ ಸೀತೆಯೂ ಪೌತ್ರ ಸಮಾನರೆಂದೂ, ಭವದ ಬಂಧ ಸಾಕೆಂದೂ, ರಾಮನ ಕೈಯಲ್ಲಿ ಹತನಾದರೆ ತಾನು ಭಾಗ್ಯ ಶಾಲಿಯೆಂದೂ ರಾವಣ ಹೇಳುವುದರ ಜೊತೆಗೆ, ರಾವಣನ ಹನ್ನೊಂದನೆಯ ಮುಖವೊಂದು ಇಲ್ಲಿ  ಪ್ರಕಟವಾಗುತ್ತ ಹೋಗುತ್ತದೆ. ಈ ಸನ್ನಿವೇಶವನ್ನು ಕಾಣುವಾಗವ ಪ್ರೇಕ್ಷಕನ ಕಂಗಳಲ್ಲಿ ಕಣ್ಣೀರ ಹನಿ ಜಾರಿಹೋಗುತ್ತದೆ.
ರಾಮ-ರಾವಣನ ಯುದ್ಧ ನಡೆಯ ಬೇಕಾದರೆ, ಯಾಗ ನಡೆಯಲೇ ಬೇಕು. ಇದಕ್ಕೆ ಪರಿಹಾರವಾಗಿ ರಾವಣ ಅಶೋಕ ವನದಲ್ಲಿರುವ ಸೀತೆಯನ್ನು  ಯಾಗಕ್ಕೆ ನಾನು ಅಣಿಗೊಳಿಸುತ್ತೇನೆ. ಆದರೆ ಯಾಗ ಮುಗಿಯುವ ತನಕ ಮಾತ್ರ ಅವಳು ದೃಶ್ಯಳಾಗಿರುತ್ತಾಳೆ. ಮತ್ತೆ ನೀನು ರಾವಣನೊಂದಿಗೆ ಸೆಣಸಿಯೇ ಆಕೆಯನ್ನು ಪಡೆಯಬೇಕು- ಎನ್ನುವ ಷರತ್ತನ್ನು ವಿಧಿಸುತ್ತಾನೆ. ಆಗ ರಾಮನ ಕಂಗಳಲ್ಲಿ ಕಣ್ಣಿರ ಹನಿ ಧಾರಾಕಾರವಾಗಿ ಹರಿದು ಹೋಗುತ್ತದೆ.
ಈ ಸನ್ನಿವೇಶವನ್ನು ನಿರ್ದೇಶಕರು ವಿಶಿಷ್ಟವಾದ ಕೈಚಳಕದ ಮೂಲಕ ಯಾಗಕ್ಕೆ ಸೀತೆಯನ್ನು ವೇದಿಕೆಯ ಮೇಲೆ ಕಾಣಿಸುವಂತೆ ಮಾಡುವುದು. ಯಾಗ ಮುಗಿದ ಮೇಲೆ ಅದೃಶ್ಯಳಾಗುವುದು. ಯಾಗದ ಫಲವಾಗಿ ಬಂದ ‘ರಾಮ ರಕ್ಷಾ ಕವಚ’ವನ್ನು ರಾಮನಿಗೆ ಕೈಗೆ ಬ್ರಾಹ್ಮ(ರಾವ)ಣ ಕಟ್ಟಿ ‘ವಿಜಯಿಭವ:’ ಕೋದಂಡರಾಮನಾಗಿ, ನಿನ್ನ ಕೀರ್ತಿ ತ್ರಿಲೋಕಗಳಲ್ಲೂ ಹರಡಲಿ ಎಂದು ಆರ್ಶೀವಾದ ಮಾಡುತ್ತಾನೆ. ರಾಮನಿಗೆ ಆಗುವ ಸಂತೊಷಕ್ಕೆ ಪಾರವೇ ಇಲ್ಲ, ಕಪಿ ಸೈನ್ಯವಂತೂ ಹರ್ಷೋದ್ಗಾರದಲ್ಲಿ ತೇಲಾಡುತ್ತಾರೆ. ರಾಮ ಬ್ರಾಹ್ಮಣನನ್ನು ಬಿಗಿದಪ್ಪಿಕೊಳ್ಳುತ್ತಾನೆ. ಬ್ರಾಹ್ಮಣನು ರಾಮನನ್ನು ತನ್ನೆ ತೋಡೆಯ ಮೇಲೆ ಮಲಗಿಸಿಕೊಂಡು ಸಂತೈಸುತ್ತಾನೆ. ಈ ನಡುವೆ ನೆರೆದಿರುವ ಕಪಿ ಸೈನ್ಯ ಸೇರಿದಂತೆ ರಾಮನ ಕಂಗಳಲ್ಲೂ ಸಂತೋಷದ ಕಣ್ಣೀರು ಭೂ ಸ್ಪರ್ಶ ಮಾಡುತ್ತದೆ. ಕೊನೆಗೆ ಬ್ರಾಹ್ಮಣ ತಾನು ಬಂದಿರುವ ಕೆಲಸವನ್ನು ಮುಗಿಸಿದ್ದೇನೆ. ರಾಮ ನಿನ್ನ ಕೆಲಸದತ್ತ ಕಾರ್ಯ ಪ್ರವೃತ್ತನಾಗು, ನಾನು ನಿನಗೆ ರಣರಂಗದಲ್ಲಿ ಎದುರಾಗುತ್ತೇನೆ ಎಂದು ತನ್ನ ಬ್ರಾಹ್ಮಣ ವೇಷವನ್ನು ಮರೆಸಿ, ನೈಜ ರೂಪವನ್ನು ತಾಳವ ಮೂಲಕ ರಾಮನಿಗೆ ಯುದ್ಧಕ್ಕೆ ಪಂಥಾಹ್ವಾನವನ್ನು ನೀಡುತ್ತಾನೆ. ಹೀಗೆ ಕತೆಯೆಲ್ಲವನ್ನು ರಾಮ ಕೌಸಲ್ಯೆಯಲಿ ತನ್ನ ಯುದ್ಧ ಕಾಲದ ಅಪರೂಪದ ಘಟನೆಯನ್ನು ಮೆಲುಕು ಹಾಕುತ್ತಾ ಹೇಳುತ್ತಾ ಹೋಗುವನು.
ಆದರೆ ರಾವಣ ಯಾಗ ಮಾಡಿದ್ದಕ್ಕೆ ರಾಮ ಪ್ರತಿಯಾಗಿ ಏನು ಕೊಡುತ್ತಾನೆ ಎನ್ನುವ ಪ್ರಶ್ನೆ ಇಲ್ಲಿ ಕಾಡುತ್ತದೆ. ಒಟ್ಟು ಇಡೀ ನಾಟಕದ ಮೂಲಕ ರಾವಣ ಕೆಟ್ಟವನು ಅಲ್ಲ, ಸನ್ನಿವೇಶಕ್ಕೆ ಒಳಗಾಗಿ ಹಾಗೇ ಆಗಿದ್ದು ಎನ್ನುವುದುನ್ನು ನಾವು ಮನಗಾಣಬಹುದು. ರಾವಣನಂತ ವ್ಯಕ್ತಿಗಳು ಸಮಾಜದಲ್ಲಿ ನೂರಾರು ಜನ ಸಿಗುತ್ತಾರೆ. ರಾಮ ಮತ್ತು ರಾವಣನ ವ್ಯಕ್ತಿತ್ವದಲ್ಲಿ ಯಾವುದೇ ರೀತಿಯ ವ್ಯತ್ಯಾಸವನ್ನು ಕಾಣಲು ಬಲುಕಷ್ಟ. ಕಥೆಯು ಈರ್ವರೂ ಶ್ರೇಷ್ಠರೆ ಎನ್ನುವುದು ಒತ್ತಿಹೇಳುತ್ತದೆ. ಕೆಟ್ಟವನಲ್ಲೂ ಒಳ್ಳೆಯತನ ಇರುತ್ತದೆ ಎನ್ನುವುದಕ್ಕೆ ರಾವಣನೆ ಸಾಕ್ಷಿ.
ಇತ್ತ ರಾಮನ ಪಟ್ಟಾಭೀಷೇಕ ಪ್ರಯುಕ್ತ ನಗರದಲ್ಲಿ ಸಂಭ್ರಮವೇ ಸಂಭ್ರಮ, ಸಡಗರವೇ ಸಡಗರ…! ನಾಟಕ ಇನ್ನೂ ಮುಗಿದಿಲ್ಲ, ದೃಶ್ಯಗಳು ಇನ್ನೂ ತೆರೆಯ ಮೇಲೆ ಬರಲಿದೆ ಎನ್ನುವ ರೀತಿಯಲ್ಲಿ ನಾಟಕ ಅಭಿನಯಿಸಿ ತೋರಿಸಿದೆ. ಪ್ರೇಕ್ಷಕನಿಗೆ ಪ್ರತಿಯೊಂದು ಸನ್ನಿವೇಶಗಳು ಚಿಂತೆಗೀಡು ಮಾಡುವ ಹಾಗೆ ಸೆರೆಹಿಡಿದುಕೊಂಡಿರುವುದಂತೂ ನಿಜ. ಅಷ್ಟರ ಮಟ್ಟಿಗೆ ‘ಏಕಾದಶಾನನ’ ನಾಟಕ ವೇದಿಕೆಯ ಮೇಲೆ ಸಾಕಾರಗೊಂಡಿರುವುದು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಕಲಾ ಪ್ರೌಢಿಮೆಗೆ ಸಂದ ಗೌರವಯೇ ಸರಿ. ರಾಷ್ಟ್ರ ಮಟ್ಟದ ಸ್ವರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಪಡೆದಿದೆ.
ನಾಟಕ ಮತ್ತು ಕವನಗಳಿಂದ ಗಮನ ಸೆಳೆದಿರುವ ಉದಯೋನ್ಮುಖ ಸಾಹಿತಿ ನ್ಯಾಯವಾದಿ ಶಶಿರಾಜ್ ರಾವ್ ಕಾವೂರ್ ರಾಮಾಯಣ ಕೃತಿಯೊಳಗಡೆ ಹೊಕ್ಕಿ ತಾನು ಕಂಡ ಬಗೆಯನ್ನು ‘ಏಕಾದಶಾನನ’ ಕೃತಿಯಲ್ಲಿ ವ್ಯಕ್ತಪಡಿಸಿರುವ ರೀತಿ ವಿಭಿನ್ನವಾದದ್ದು. ರಾವಣನು ಕೆಟ್ಟವನಲ್ಲ ಎನ್ನುವುದನ್ನು ‘ಏಕಾದಶಾನನ’ ನಾಟಕ ಅನಾವರಣ ಮಾಡುವ ಮೂಲಕ ರಾಮನ ಮತ್ತು ರಾವಣನ ವ್ಯಕ್ತಿತ್ವದ ಸಂಘರ್ಷದ ಹೊಳಪುನ್ನು ತೆರೆದಿಟ್ಟಿದೆ. ಈ ಬಗೆಯಿಂದ ಕೃತಿ ಇಂದಿನ ದಿನಕ್ಕೆ ಬಹಳ ಮೌಲ್ಯತ್ಮಾಕವಾಗಿರುವುದರಲ್ಲಿ ಎರಡು ಮಾತಿಲ್ಲ. ಇಡೀ ಗೆಲುವು ಸಾಧಿಸಲು ಸಾಹಿತ್ಯ ಕೃತಿ ಎನ್ನುವುದು ನಾಟಕ ಕೃತಿಗೆ ಇಳಿದಿದ್ದು, ಕೃತಿ ಹೊಸ ಅರ್ಥವನ್ನು ಕೊಡುವುದರೊಂದಿಗೆ, ರಂಗ ತಂತ್ರಕ್ಕೆ, ಅಭಿನಯಕ್ಕೆ ಪೂರಕವಾಗಿತ್ತು ಎಂದು ನಿರ್ದೇಶಕ ಜೀವನ್ ರಾಂ ಸುಳ್ಯ ಅಭಿಪ್ರಾಯಪಟ್ಟಿದ್ದಾರೆ.
ರಂಗದ ಮೇಲೆ ವಿಶಿಷ್ಟತ್ಮಾಕವಾಗಿ ರಂಗ ವಿನ್ಯಾಸ, ಸಂಗೀತ ಸಂಯೋಜನೆ, ಬೆಳಕು, ವಸ್ತ್ರ ವಿನ್ಯಾಸ, ಹೀಗೆ ಎಲ್ಲಾ ನಾಟಕದ ಗೆಲುವಿಗೆ ಕಾರಣವಾಗಿದೆ. ನಾಟಕ ಮುಖ್ಯವಾಗಿ ಪ್ರೇಕ್ಷಕನಿಗೆ ಮನೋರಂಜನೆ ನೀಡುವುದರ ಜೊತೆಗೆ ರಾವಣನ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತದೆ. ನಾಟಕ ನೋಡಿದವನು ರಾಮನ ಫೋಟೋ ಇಟ್ಟು ಪೂಜೆ ಮಾಡುವಲ್ಲಿ, ಜೊತೆಗೆ ರಾವಣನ ಫೋಟೋ ಇಟ್ಟು ಪೂಜೆ ಮಾಡಿದರೆ ಏನು ತಪ್ಪು ಎನ್ನುವ ಪ್ರಶ್ನೆ?ಯನ್ನು ಮೂಡಿಸಿರುವುದು ನಾಟಕಕ್ಕೆ ಸಂಧ ಗೌರವವಾಗಿದೆ. ಸಮಾಜದಲ್ಲಿರುವ ಪ್ರತಿಯೊಬ್ಬನಲ್ಲೂ ಒಳ್ಳೆತನ ಮತ್ತು ಕೆಟ್ಟತನ ಇದ್ದೆ ಇರುತ್ತದೆ. ಅವೆರಡು ಒಂದೇ ನಾಣ್ಯದ ಎರಡು ಮುಖಗಳಂತೆ ಅದು ಸನ್ನಿವೇಶದ ಮೇಲೆ ಅವಲಂಭಿತವಾಗಿರುತ್ತದೆ ಎನ್ನುವುದನ್ನು ಇಲ್ಲಿ ಕಾಣಬಹುದು. ಒಟ್ಟು ಈ ನಾಟಕ ಇಂದಿನ ದಿನಕ್ಕೆ ಹೆಚ್ಚು ಪ್ರಸ್ತುತ ಎಂದು ದೃಶ್ಯಗಳು ಮತ್ತೆ ಮತ್ತೆ ಹೇಳುತ್ತದೆ.